 ಸಂಗೀತ : ಮೈಸೂರು ಅನಂತಸ್ವಾಮಿ
 ಸಾಹಿತ್ಯ : ಗೋಪಾಲ ಕೃಷ್ಣ ಅಡಿಗ
 ಹಾಡುಗಾರರು: ರತ್ನಮಾಲಾ ಪ್ರಕಾಶ್

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು 
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು  |ಪ|  

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ 
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ     |೧|ಯಾವ| 
 
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ         
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ |೨|ಯಾವ| 

ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ  
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ |೩|ಯಾವ| 

ಯಾವ ಮೋಹನ ಮುರಳಿ ಕರೆಯಿತೋ ಇದ್ದಕಿದ್ದೊಡೆ ನಿನ್ನನು 
ಯಾವ ಬೃಂದಾವನವು ಚಾಚಿತೋ ತನ್ನ ಮಿಂಚಿನ ಕೈಯನು |೪| 

ಈ ಹಾಡಿನ ಸಾಹಿತ್ಯವನ್ನು ಅಮೇರಿಕಾ ಅಮೇರಿಕಾ ಚಿತ್ರದ ಹಾಡೊಂದರಲ್ಲಿ ಬಳಸಿಕೊಳ್ಳಲಾಗಿದೆ.

Category:ಭಾವಗೀತೆಗಳು
Category:ಗೋಪಾಲ ಕೃಷ್ಣ ಅಡಿಗ ಸಾಹಿತ್ಯ
Category:ಅಮೇರಿಕಾ ಅಮೇರಿಕಾ ಚಿತ್ರ